ಬೋರೇಗೌಡನ ಮನೆ ಮುಗ್ಧ ಮನಸಿಗೆ ಕೊಳ್ಳಿ ಇಟ್ಟ ಮಗ - 3.5/5 ****
Posted date: 18 Sat, Feb 2023 01:42:13 PM
ನಿರ್ದೇಶಕ ಕೆ.ಎಂ.ರಘು ಅವರು ದೊಡ್ಡಹಟ್ಟಿ ಬೋರೇಗೌಡ ಚಿತ್ರದ ಮೂಲಕ  ಮುಗ್ಧ ರೈತನೊಬ್ಬನ ಮನದ ಸೂಕ್ಷ್ಮ ಭಾವನೆಗಳನ್ನು ತೆರೆದಿಟ್ಟಿದ್ದಾರೆ. ಒಂದು ಪುಟ್ಟ ಗೂಡು ಕಟ್ಟಿಕೊಳ್ಳಲು ತಾನೆಷ್ಟೇ ಕಷ್ಟಪಟ್ಟರೂ ಅವೆಲ್ಲವನ್ನೂ ಸಹಿಸಿಕೊಳ್ಳುತ್ತಾನೆ. ಆದರೆ ಹೆತ್ತ ಮಗ, ಸೊಸೆಯಿಂದ ಪ್ರೀತಿ ಬಯಸುತ್ತಾನೆ. ಅದೇ ಸಿಗದಿದ್ದಾಗ ಜೀವನದಲ್ಲಿ ಹತಾಶನಾಗುತ್ತಾನೆ.
 
ಹಳ್ಳಿಯ ಅಮಾಯಕ ರೈತ ಬೋರೇಗೌಡ ಮನೆಯೊಂದನ್ನು ಕಟ್ಟಿಕೊಳ್ಳಬೇಕೆಂದು ಪಂಚಾಯ್ತಿ ವತಿಯಿಂದ  ಸೌಲ ಪಡೆದುಕೊಳ್ಳಲು ಹೋದಾಗ  ಏನೆಲ್ಲ ಕಷ್ಟಪಡಬೇಕಾಗುತ್ತದೆ ಎಂಬುದನ್ನು ನೈಜ ದೃಶ್ಯಗಳ ಮೂಲಕ ನಿರ್ದೇಶಕ ರಘು  ಕಟ್ಟಿಕೊಟ್ಟಿದ್ದಾರೆ, ಬೋರೇಗೌಡ ಹಾಗೂ ರತ್ನಮ್ಮ ದಂಪತಿ ತಮಗೊಂದು ಸೂರು ಕಟ್ಟಿಕೊಳ್ಳಲು ಹೋದಾಗ ಹಣ ಮಂಜೂರು ಮಾಡಿಕೊಂಡುವ ಸಂದರ್ಭದಲ್ಲಿ ಪಿಡಿಓ ಮೆಂಬರ್, ಪಂಚಾಯ್ತಿ ಅದ್ಯಕ್ಷ ಹೀಗೆ ಪ್ರತಿಯೊಬ್ಬರಿಗೂ ಲಂಚ ಕೊಡಬೇಕಾಗುತ್ತದೆ, ಆದರೆ ರತ್ನಮ್ಮ ಎಂಬ ಹೆಸರಿನ ಬೇರೊಬ್ಬ ಮಹಿಳೆಗೆ ಆ ಹಣ ಮಂಜೂರಾಗಿರುತ್ತದೆ. ನಂತರ  ಆಕೆಯ ಮನವೊಲಿಸಿ ಒಪ್ಪಿಸಿ ಹಂತ ಹಂತವಾಗಿ ಮಂಜೂರಾಗುವ ಹಣವನ್ನು ಬಿಡಿಸಿಕೊಳ್ಳಬೇಕಾಗಿರುತ್ತದೆ. ಮೊದಲ ಕಂತಿನ ಹಣವನ್ನು  ಸಲೀಸಾಗಿ ಬಿಡಿಸಿಕೊಂಡರೂ ನಂತರದ ೨ ಕಂತುಗಳನ್ನು ಬಿಡಿಸಿಕೊಳ್ಳುವ ಮೊದಲೇ ರತ್ನಮ್ಮ ಎಂಬ ಆ ಮಹಿಳೆ ಇದ್ದಕ್ಕಿದ್ದಂತೆ ಮರಣ ಹೊಂದುತ್ತಾಳೆ. ಇದರಿಂದ  ಮನೆಕೆಲಸ  ಅರ್ಧಕ್ಕೇ ನಿಂತುಹೋಗಿ ಬೋರೇಗೌಡನಿಗೆ  ದಿಕ್ಕೇ ತೋಚದಂತಾಗುತ್ತದೆ. ಆಗ ಸ್ನೇಹಿತ ನೀಡಿದ ಸಲಹೆ ಮೇರೆಗೆ ಬೋರೇಗೌಡ ತನ್ನ ಮಗನಿಗೆ ಮದುವೆ ಮಾಡಿಸುತ್ತಾನೆ. ಬರುವ ವರದಕ್ಷಿಣೆ ಹಣದಿಂದ ಮನೆಯ ಛಾವಣೆ ಹಾಕಿಸುತ್ತಾನೆ. ಆದರೆ ಮನೆಗೆ ಬಂದ ಸೊಸೆ ಇದೇ ವಿಷಯವನ್ನು ಮನೆಯವರಿಗೆಲ್ಲ ನೋವಾಗುವಂತೆ ಚುಚ್ಚಿ ಚುಚ್ಚಿ ಹೇಳುತ್ತಾಳೆ.
 
ಅಷ್ಟೇ ಅಲ್ಲದೆ ಮನೆಯ ಉಳಿದ ಕೆಲಸಕ್ಕೆ ತನ್ನ ತಂದೆ ಹಣ ಕೊಡಬೇಕೆಂದರೆ ನಿನ್ನ ತಂದೆ ತಾಯಿಯನ್ನು  ಮನೆಯಿಂದ ಹೊರಕಳಿಸಬೇಕೆಂದು ಗಂಡನಿಗೆ ತಾಕೀತು ಮಾಡುತ್ತಾಳೆ. ಈ ಮಾತು ಕೇಳಿ ಮನನೊಂದ ಬೋರೇಗೌಡ ದಂಪತಿ ಮನೆ ಬಿಟ್ಟು ಹೊರಡುತ್ತಾರೆ, ಮಗ ಅದನ್ನು ನೋಡಿಯೂ ನೋಡದವನಂತೆ ಸುಮ್ಮನಿರುತ್ತಾನೆ. ನಾವು ಮಗನಿಗಾಗೇ ಇಷ್ಟೆಲ್ಲ ಕಷ್ಟಪಟ್ಟರೂ ಮಗನಿಂದ ಒಂದು ಪ್ರೀತಿಯ ನುಡಿ ಸಹ  ಹೊರಬರದಿದ್ದಾಗ ಇನ್ನಷ್ಟು ಘಾಸಿಗೊಳ್ಳುತ್ತಾರೆ.  ಕೊನೆಗೆ ತಾವು ಬದುಕಿರಬಾರದೆಂದು ಗಟ್ಟಿ ನಿರ್ಧಾರವನ್ನು  ಕೈಗೊಳ್ಳುತ್ತಾರೆ. ಪೋಷಕರಾದವರು ತಮ್ಮ ಮಕ್ಕಳಿಂದ ಬಯಸುವುದು ಅವರ ಪ್ರೀತಿ, ಪ್ರೇಮದ ಮಾತುಗಳನ್ನು.  ಮಗ ತನ್ನ ತಂದೆ ತಾಯಿ ಪರವಾಗಿ ನಿಂತಿದ್ದರೆ ಅವರು ಆ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ ಎಂಬುದನ್ನು ವೀಕ್ಷಕರ ಮನಮುಟ್ಟುವ ಹಾಗೆ ನಿರ್ದೇಶಕ ರಘು ಅವರು ಈ ಚಿತ್ರದಲ್ಲಿ ತುಂಬಾ ಪರಿಣಾಮಕಾರಿಯಾಗಿ ತೋರಿಸಿದ್ದಾರೆ.  ಮೈಸೂರು ಗ್ರಾಮಾಂತರ   ಪರಿಸರವನ್ನು ಈ ಕಥೆಗೆ ಪೂರಕವಾಗಿ  ತೆಗೆದುಕೊಂಡು ಮನುಷ್ಯನ ಸಂಬಂಧ, ಭಾವನೆಗಳು ಕಥೆ ಹೇಳಿದ್ದಾರೆ.  ಮುಗ್ದತೆಯನ್ನೇ ಮೈಗೂಡಿಸಿಕೊಂಡಿರುವ ರೈತನಾಗಿ  ಶಿವಣ್ಣ ಬೀರನಹುಂಡಿ ಬೋರೇಗೌಡನ ಪಾತ್ರವೇ ತಾನಾಗಿ ಜೀವಿಸಿದ್ದಾರೆ. ಉಳಿದಂತೆ ಪತ್ನಿಯ ಪಾತ್ರ ಮಾಡಿರುವವರೂ ಅಪ್ಪಟ ರಂಗಭೂಮಿ ಪ್ರತಿಭೆಯಾಗಿದ್ದು, ಉತ್ತಮ ಅಭಿನಯ ನೀಡಿದ್ದಾರೆ. ಹರ್ಷವರ್ಧನ್‌ರಾಜ್  ಅವರ ಸಂಗೀತದ ಹಾಡುಗಳು ಕೇಳುವಂತಿವೆ. ಹುಣಸೂರು ತಾಲೂಕಿನ ಗದ್ದಿಗೆ ಹಾಗೂ ಎಚ್‌ಡಿ ಕೋಟೆ ತಾಲೂಕಿನ ಸುತ್ತಮುತ್ತ ಚಿತ್ರವನ್ನು ನಾಗರಾಜ್‌ಮೂರ್ತಿ ಅವರು ಸುಂದರವಾಗಿ ಸೆರೆಹಿಡಿದಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed